ಮುದ್ದೇಬಿಹಾಳ: ನಗರದ ಹೃದಯ ಭಾಗದಲ್ಲಿರುವ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಘಟಕ ಮತ್ತು ಬಸ್ ನಿಲ್ದಾಣ ಸುಧಾರಣೆಗೆ ಈಗಾಗಲೇ 4.90 ಕೋಟಿ ಅನುದಾನದ ಯೋಜನೆ ಸಿದ್ದಪಡಿಸಿದ್ದು ಆದಷ್ಟು ಬೇಗ ಸುಧಾರಣೆ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಶಾಸಕ, ಕರ್ನಾಟಕ ಸೋಪ್ಸ್ ಆ್ಯಂಡ್ ಡಿಟರ್ಜೆಂಟ್ ಲಿಮಿಟೆಡ್ ಅಧ್ಯಕ್ಷ ಸಿ.ಎಸ್.ನಾಡಗೌಡ ಹೇಳಿದರು.
ಶನಿವಾರ ಸಾರಿಗೆ ಘಟಕದ ಹಿರಿಯ ಅಧಿಕಾರಿಗಳೊಂದಿಗೆ ಬಸ್ ನಿಲ್ದಾಣ, ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿ ಸುಧಾರಣೆಗೆ ಕೆಲವು ಸಲಹೆ ಸೂಚನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟಕ, ನಿಲ್ದಾಣದ ರಸ್ತೆಗಳಿಗೆ ಫೆವರ್, ಕಾಂಕ್ರಿಟ್ ಸೇರಿ ಇತರೆ ಕೆಲಸಗಳ ಅವಶ್ಯಕತೆ ಇರುವುದನ್ನು ಮನಗಂಡು ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಇಂಜಿನೀಯರುಗಳ ಜೊತೆ ಚರ್ಚಿಸಲಾಗಿದೆ. ಆದಷ್ಟು ಬೇಗ ಸರ್ಕಾರಕ್ಕೆ ಮನವಿ ಮಾಡಿಕೊಂಡು ನಿಗಮದ ಮೂಲಕ ಅನುದಾನ ಬಿಡುಗಡೆಗೆ ಕ್ರಮ ವಹಿಸಲಾಗುತ್ತದೆ. ಅನುದಾನ ಲಭ್ಯವಾದರೆ ಸುಧಾರಣೆ ಕೆಲಸಕ್ಕೆ ವೇಗ ದೊರಕುತ್ತದೆ ಎಂದರು.

ನಂತರ ಈಗಾಗಲೇ ಹಡಲಗೇರಿ ರಸ್ತೆ ಪಕ್ಕದ ಹಳೇಯ ಕೈಗಾರಿಕಾ ವಸಾಹತು ಪಕ್ಕದಲ್ಲಿರುವ ಸರ್ಕಾರದ 5 ಎಕರೆ ಜಾಗವನ್ನು ಪರಿಶೀಲಿಸಿದ ಅವರು, ನಗರದ ಹೃದಯ ಭಾಗದಲ್ಲಿರುವ ಸಾರಿಗೆ ಘಟಕವನ್ನು ಸ್ಥಳಾಂತರಿಸಿ ಬಸ್ ನಿಲ್ದಾಣವನ್ನು ವಿಸ್ತಾರಗೊಳಿಸುವ ಯೋಜನೆ ಬಹಳ ವರ್ಷಗಳದ್ದಾಗಿದೆ. ಇದಕ್ಕಾಗಿ ತಾಲೂಕು ಆಸ್ಪತ್ರೆ ಪಕ್ಕದಲ್ಲಿರುವ ಹಡಲಗೇರಿ ರಸ್ತೆಯ 5 ಎಕರೆ ಜಮೀನನ್ನು ಪರಿಶೀಲಿಸಿದ್ದು ನಿಗಮದ ಇಂಜಿನೀಯರುಗಳು ಆ ಸ್ಥಳದಲ್ಲಿ ಘಟಕ ನಿರ್ಮಾಣ ಸಾಧ್ಯತೆ, ತಗಲುವ ಅನುದಾನ ಇನ್ನಿತರ ಮಾಹಿತಿ ತಯಾರಿಸಲಿದ್ದಾರೆ. ಒಂದು ವೇಳೆ ಈಗ ಗುರ್ತಿಸಿರುವ ಜಾಗ ಸರಿಹೋಗದಿದ್ದರೆ ಎಲ್ಲಿಯಾದರೂ ಕನಿಷ್ಠ 3 ಎಕರೆ ಜಾಗ ಸಿಕ್ಕರೂ ಅಲ್ಲಿ ಘಟಕ ಸ್ಥಳಾಂತರಿಸುವ ಆಲೋಚನೆ ಇದೆ. ಒಂದು ವೇಳೆ ಕಡಿಮೆ ಜಮೀನು ಸಿಕ್ಕಲ್ಲಿ ಈಗಿರುವ ಘಟಕವನ್ನು ಉಳಿಸಿಕೊಂಡು ಇನ್ನರ್ಧ ಘಟಕ ಹೊಸದಾಗಿ ಮಾಡಿ ಈಗಿರುವ ಹಳೇಯ ಘಟಕದ ಒತ್ತಡ ಕಡಿಮೆ ಮಾಡಲು ಚಿಂತನೆ ನಡೆಸಲಾಗುತ್ತಿದೆ ಎಂದರು.
ಶುಕ್ರವಾರ ಕೆಕೆಆರ್ಟಿಸಿ ಕಲಬುರ್ಗಿ ವಿಭಾಗದ ವ್ಯವಸ್ಥಾಪಕ ನಿರ್ದೇಶಕಿ ಡಾ: ಬಿ.ಸುಜಾತಾ ಅವರು ಘಟಕ, ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಅವರ ಬಂದು ಹೋದ ಬೆನ್ನಲ್ಲೇ ಶಾಸಕರೂ ಘಟಕ, ನಿಲ್ದಾಣಕ್ಕೆ ಭೇಟಿ ನೀಡಿ ವ್ಯವಸ್ಥಾಪಕ ನಿರ್ದೇಶಕಿಯವರು ನೀಡಿರುವ ಸಲಹೆ, ಸೂಚನೆ ಪಾಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.








