ಸುನಾಮಿ ನ್ಯೂಸ್ ಮುದ್ದೇಬಿಹಾಳ(Muddebihal): ಶಿಕ್ಷಣ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ, ಅನಧಿಕೃತ ವಸತಿ, ಶಿಕ್ಷಣ ಕಾಯ್ದೆಯ ನಿಯಮಾವಳಿ ಉಲ್ಲಂಘನೆ ಮಾಡಿದ ವಿದ್ಯಾಸ್ಪೂರ್ತಿ ಆಂಗ್ಲ ಮಾಧ್ಯಮ ಶಾಲೆ ಸೇರಿದಂತೆ ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಗಳು ನಿಯಮಾವಳಿಗಳನ್ನು ಉಲ್ಲಂಘಿಸುತ್ತಿರುವವರ ಮೇಲೆ ಕ್ರಮ ಕೈಗೊಳ್ಳುವಂತೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ಅಮಾನತ್ತು ಮಾಡುವಂತೆ ಒತ್ತಾಯಿಸಿ ರಾಜ್ಯ ದಲಿತ ಸಂಘರ್ಷ ಸಮಿತಿಯ ಚಂದ್ರಕಾಂತ ಕಾದ್ರೊಳ್ಳಿ ಬಣದ ಜಿಲ್ಲಾಧ್ಯಕ್ಷ ಬಾಲಚಂದ್ರ ಹುಲ್ಲೂರ ನೇತೃತ್ವದಲ್ಲಿ ಇಲ್ಲಿನ ತಹಸೀಲ್ದಾರ ಕಚೇರಿಯ ಆವರಣದಲ್ಲಿ ಕಳೆದ 6 ದಿನಗಳಿಂದ ಧರಣಿ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ.
ಈ ಕುರಿತು ಹೋರಾಟಗಾರ ಬಾಲಚಂದ್ರ ಹುಲ್ಲೂರ ಮಾತನಾಡಿ, ಹೋರಾಟ 6ನೇ ದಿನಕ್ಕೆ ಕಾಲಿಟ್ಟರೂ ಸಂಬಂಧಿಸಿದ ಅಧಿಕಾರಿಗಳು ಅನಧಿಕೃತ ಶಾಲೆಗಳ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ. ಹಾರಿಕೆ ಉತ್ತರಗಳನ್ನು ಕೊಡುತ್ತಿದ್ದಾರೆ. ಇದನ್ನೆಲ್ಲ ನೋಡಿದರೆ ಅನಧಿಕೃತ ಖಾಸಗಿ ಸಂಸ್ಥೆಗಳ ಜೊತೆ ಶಾಮೀಲಾಗಿದ್ದಾರಾ ಎಂಬ ಅನುಮಾನಗಳು ಶುರುವಾಗಿವೆ. ಡಿಡಿಪಿಐ ಕ್ರಮ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವೇ ಕಳೆದು ಹೋಗಿದೆ. ಹಾಗಾಗಿ ಧಾರವಾಡದ ಆಯುಕ್ತರೇ ಖುದ್ದು ಆಗಮಿಸಿ ಅಕ್ರಮಗಳ ದಾಖಲೆ ಇರುವ ವಿದ್ಯಾಸ್ಪೂರ್ತಿ ಶಾಲೆಯನ್ನು ಮೊದಲು ಸೀಜ ಮಾಡಬೇಕು. ಬಳಿಕ ಎಲ್ಲ ಅನಧಿಕೃತ ಶಾಲೆಗಳ ಮೇಲೆ ಕ್ರಮ ಕೈಗೊಂಡು ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಳ್ಳದ ಡಿಡಿಪಿಐ ಮತ್ತು ಬಿಇಓ ಅವರನ್ನ ಕೂಡಲೇ ಅಮಾನತ್ತು ಮಾಡಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ ಯಾವುದೇ ಅಂಜಿಕೆ ಅಳಕು ಇಲ್ಲದೇ ತಮಟೆ ಚಳುವಳಿ ಮತ್ತು ಕಪ್ಪು ಪಟ್ಟಿ ಪ್ರರ್ಶಿಸುವ ಅಗೂ ಬೊಬ್ಬೆ ಹಾಕುವ ಮೂಲಕ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು.
ಹೋರಾಟಗಾರರ ಮನವೊಲಿಕೆಗೆ ಡಿಡಿಪಿಐ ವೀರಯ್ಯ ಸಾಲಿಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ಭೇಟಿ ಸಾಕಷ್ಟು ಪ್ರಯತ್ನಿಸಿದರೂ ಹೋರಾಟಗಾರರು ತಮ್ಮ ಪಟ್ಟನ್ನು ಬಿಡಲಿಲ್ಲ. ಅಧಿಕಾರಿಗಳಿಗೆ ಛಾಟಿ ಬೀಸಿದ ಹೋರಾಟಗಾರರು ಕೂಡಲೇ ಅನಧಿಕೃತ ಶಾಲೆಗಳ ಮೇಲೆ ಕ್ರಮ ಕೈಗೊಳ್ಳದಿದ್ದರೆ ಹೋರಾಟವನ್ನು ಉಗ್ರವಾಗಿಸುವ ಎಚ್ಚರಿಕೆ ನೀಡಿದರು.
ರಾಜ್ಯ ಹೋರಾಟಗಾರ ದುರ್ಗಪ್ಪ ದೊಡಮನಿ, ಅಂಬೇಡ್ಕರ್ ಸೇನೆಯ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಕಟ್ಟಿಮನಿ, ತಾಲೂಕು ಅಧ್ಯಕ್ಷ ಗೋಪಾಲ ಕಟ್ಟಿಮನಿ, ಪರಶುರಾಮ ಕವಡಿಮಟ್ಟಿ, ಶ್ರೀಶೈಲ ಸುಧಾಕರ, ಶೇಖರ ಹಡಗಿನಾಳ, ಕಾದ್ರೊಳ್ಳಿ ಬಣದ ಬಾಗೇವಾಡಿಯ ತಾಲೂಕು ಅಧ್ಯಕ್ಷ ಸುರೇಶ ದೊಡಮನಿ ಉಪಾಧ್ಯಕ್ಷ ದಾಳಪ್ಪ ಕೆಳಗೇರಿ, ಶಿವಪ್ಪ ಮಾದರ, ಮೌನೇಶ ಮಾದರ, ಸಂಗಮೇಶ ಢವಳಗಿ, ಪರಶುರಾಮ ಹೊಸಮನಿ, ಮಾರುತಿ ಸಿದ್ದಾಪೂರ, ರಾಘವೇಂದ್ರ ಮಾದರ, ಯಮನೂರಿ ಗುಡಿಹಾಳ, ಬಸವರಾಜ ಮಲಗಲದಿನ್ನಿ, ಶಿವು ದೇವೂರ, ಪಟ್ಟಣದ ವಿದ್ಯಾನಗರ ನಿವಾಸಿ ಗೌರಮ್ಮ ಹುನಗುಂದ ಸೇರಿದಂತೆ ಹಲವರು ಹೋರಾಟಕ್ಕೆ ಬೆಂಬಲಿಸಿ ತಮ್ಮ ಆಕ್ರೋಷವನ್ನು ಹೊರಹಾಕಿದ್ದಾರೆ.








